ಮೈಲೊನೈಟ್
ಒಂದು ರೂಪಾಂತರ ಶಿಲೆ. ಶಿಲೆಗಳು ಸಂವರ್ಧ ಪ್ರಧಾನ ರೂಪಾಂತರಕ್ಕೆ ಒಳಗಾದಾಗ ಅವುಗಳ ಒಳರಚನೆ ಛಿದ್ರವಾಗುತ್ತದೆ. ಖನಿಜ ಕಣಗಳು ತೀವ್ರತರ ಭೇದಾತ್ಮಕ ಚಲನೆಗಳಿಗೆ ಒಳಗಾಗಿ ಉರುಟು ರಚನೆ ತೋರುತ್ತವೆ. ಈ ತೆರನಾದ ಶಿಲೆಗಳಿಗೆ ಲ್ಯಾಪ್‍ವರ್ತ್ ಎಂಬ ಭೂವಿe್ಞÁನಿ ಮೈಲೊನೈಟ್ ಎಂದು ಹೆಸರಿತ್ತ. ಕ್ವಿನ್‍ಸೆಲ್ ಎಂಬುವ ಸಂಪೂರ್ಣ ನುಚ್ಚು ನೂರಾಗಿರುವ ಯಾವ ಬಗೆಯ ಒಳರಚನೆಯನ್ನೂ ತೋರದ ಪುಡಿಪುಡಿಯಾದ ಶಿಲೆಯನ್ನು ಕ್ಯೆಟಾಕ್ಲಾಸೈಟ್ ಎಂದು ಹೆಸರಿಸಿದ. ಹಲವೊಂದು ಮೈಲೊನೈಟ್‍ಗಳು ಪದರು ರಚನೆಯನ್ನೂ ತೋರಿಸುತ್ತವೆ. ಇವಕ್ಕೆ ಮೈಲೊನೈಟ್ ಷಿಸ್ಟ್ ಅಥವಾ ಮೈಲೊನೈಟ್ ಪದರುಶಿಲೆಗಳು ಎಂದು ಹೆಸರು. 

ಎಲ್ಲ ಶಿಲೆಗಳೂ ಒಂದೇ ರೀತಿಯಲ್ಲಿ ನುಚ್ಚುನೂರಾಗುವುದಿಲ್ಲ. ಕ್ವಾಟ್ರ್ಸ್ ಮತ್ತು ಫೆಲ್ಡ್‍ಸ್ಪಾರ್‍ಗಳಿಂದ ಆದ ಆಮ್ಲೀಯ ಶಿಲೆಗಳು ಸುಲಭವಾಗಿ, ಯಾವ ಹೊಸ ಬಗೆಯ ಖನಿಜಗಳ ಬೆಳೆವಣಿಗೆಗೂ ಅವಕಾಶಕೊಡದೆ ಮೈಲೊನೈಟ್ ಆಗಿ ಮಾರ್ಪಡುತ್ತವೆ. ಆದರೆ ಗ್ಯಾಬ್ರೊ, ಬೆಸಾಲ್ಟ್ ಮುಂತಾದ ಪ್ರತ್ಯಾಮ್ಲೀಯ ಶಿಲೆಗಳು ಹೀಗಾಗದೆ ಕ್ಲೋರೈಟ್ ಮೊದಲಾದ ಖನಿಜಗಳ ಪದರುಶಿಲೆಯಾಗಿ ಮಾರ್ಪಟ್ಟು ಹಲವು ಹೊಸ ಖನಿಜಗಳ ಬೆಳೆವಣಿಗೆಗೂ ಅವಕಾಶ ಕಲ್ಪಿಸುತ್ತವೆ. 

ತೀವ್ರಗತಿಯ ಭೂಚಲನೆಗಳು ತಲೆದೋರುವ ಪ್ರದೇಶಗಳ ಶಿಲಾಭಾಗಗಳು ಪರಸ್ಪರ ಘರ್ಷಣೆಗೆ ಈಡಾಗಿ ಹೆಚ್ಚಿನ ಉಷ್ಣ ಉತ್ಪತ್ತಿಯಾಗಬಹುದು. ಉಷ್ಣಕ್ಕೆ ಒಳಗಾದ ಶಿಲಾಭಾಗ ಕರಗಿ ಬೇಗನೆ ಆರುವುದರಿಂದ ಗಾಜಿನಂತೆ ಮುದ್ದೆಯಾಗಿ ಮಾರ್ಪಾಡಾಗುವುದುಂಟು. ಹೀಗೆ ಉಂಟಾದವು ಅನೇಕ ವೇಳೆ ಕಂದು ಬಣ್ಣದ, ಶಿಲಾಗಾಜು ಸಣ್ಣ ನರಗಳೋಪಾದಿಯಲ್ಲಿ ಅಕ್ಕಪಕ್ಕದ ಶಿಲೆಗಳನ್ನು ಅವುಗಳಲ್ಲಿಯ ಸೀಳು ಮತ್ತು ಬಿರುಕುಗಳ ಉದ್ದಕ್ಕೂ ಆವರಿಸಿರಬಹುದು. ಇಂಥವನ್ನು ಅಲ್ಟ್ರಾಮೈಲೊನೈಟ್, ಟ್ರಾಪ್‍ಷಾಟಿನ ನೈಸ್ ಎಂದು ಕರೆಯುತ್ತಾರೆ. ಕರ್ನಾಟಕದ ಶಿವನಸಮುದ್ರದ ಬಳಿ ಈ ಬಗೆಯ ಶಿಲೆಯನ್ನು ಕಾಣಬಹುದು. 

ಕೆಲವು ಕಣಶಿಲೆಗಳೂ ಇದೇ ತೆರನ ಬದಲಾವಣೆಗಳಿಗೆ ಬಳಗಾಗಿ ಒಂದು ಬಗೆಯ ನೈಸ್ ರಚನೆಯನ್ನು ಪಡೆಯುತ್ತವೆ. ಇವಕ್ಕೆ ಫ್ಲೇಸರ್ ಗ್ರ್ಯಾನೈಟ್, ಫ್ಲೇಸರ್ ಗ್ಯಾಬ್ರೊ ಎಂಬ ಹೆಸರುಗಳಿವೆ.  	 				      
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ